ನೆಗಡಿಯಾದರೆ ಸಾಕು ಶುಂಠಿ ಕಷಾಯ ಮಾಡಿ ಕುಡಿ ಸಾಕು ಎನ್ನುವುದು ನಮ್ಮ ಕಡೆ ರೂಢಿ. ಗಂಟಲಿನ ಕಿಚ್ ಕಿಚ್ ದೂರಾಗಿಸಲು ವಿಕ್ಸ್ ನ ಗೋಲಿಗಳನ್ನು ತೆಗೆದುಕೊಳ್ಳುವ ಮೊದಲೆ ಹಸಿ ಶುಂಠಿ ಸಕ್ಕರೆ ನಮ್ಮ ಬಾಯಿ ಸೇರಿರುತ್ತದೆ.
ತುಳಸಿ, ಶುಂಠಿ, ಕೊತ್ತಂಬರಿ ಬೀಜ ಇವು ಕಷಾಯಕ್ಕೆ ಖಾಯಂ ಪದಾರ್ಥಗಳು. ಅಡುಗೆಗೆ ಬಳಕೆಯಾಗುವುದಕ್ಕಿಂತ ಆರೋಗ್ಯ ವರ್ಧನೆಗೂ ಶುಂಠಿ ಹೆಚ್ಚು ಸಹಕಾರಿ ಎನ್ನಲಡ್ಡಿಯಿಲ್ಲ. ಶಾಲೆಯಲ್ಲಿ ಮಾತ್ರ ಮೇಷ್ಟ್ರು ಒಣ ಶುಂಠಿ ಕೊಡ್ಲಾ ಎಂದರೆ ನಡುಕ ಹುಟ್ಟಿಬಿಡುತ್ತಿತ್ತು.
ಪ್ರಪಂಚದೆಲ್ಲೆಡೆ ಸಿಗುವ ಅತ್ಯುತ್ತಮ ಔಷಧಿ ಎಂಬ ಕಾರಣಕ್ಕೆ ಇದನ್ನು 'ಮಹೌಷಧಿ', 'ವಿಷ್ವಬೇಷಜ' ಎಂದು ಕರೆಯುತ್ತಾರೆ. ಜಠರದ ತೊಂದರೆ ನಿವಾರಣೆಗೆ, ಅಜೀರ್ಣ, ವಾಯು, ವಾಕರಿಕೆ, ಮಲಬದ್ಧತೆ, ಹೊಟ್ಟೆಯ ಸೋಂಕು ನಿವಾರಣೆಗೆ ಸಹಕಾರಿ. ಕೊಲೆಸ್ಟ್ರಾಲ್ ಕಮ್ಮಿ ಮಾಡುವುದರಿಂದ ಹೃದಯ ಸಂಬಂಧಿ ರೋಗದಿಂದ ಬಳಲುವವರಿಗೆ ಸಹಕಾರಿ.
ಶುಂಠಿಯ ಸಾಮಾನ್ಯ ಉಪಯೋಗಗಳು:
* ಅರ್ಧ ಟೀ ಚಮಚ ಶುಂಠಿ ರಸ, 1 ಟೀ ಚಮಚ ನಿಂಬೆರಸ, ಅಷ್ಟೇ ಪುದೀನ ಎಲೆಯ ರಸ, 1 ಟೀ ಚಮಚ ಜೇನುತುಪ್ಪ ಸೇರಿಸಿ 3 ಭಾಗ ಮಾಡಿ ದಿನಕ್ಕೆ 3 ಬಾರಿ ಸೇವಿಸಲು ಶ್ವಾಸರೋಗ, ಸ್ವರ ಭೇದ, ಅಜೀರ್ಣ, ಕೆಮ್ಮು ರೋಗಗಳನ್ನು ನಿವಾರಿಸಬಹುದು.
* 1 ಸಣ್ಣ ತುಂಡು ಹಸಿ ಶುಂಠಿಯನ್ನು 1 ಬಟ್ಟಲು ನೀರಿನಲ್ಲಿ 15 ನಿಮಿಷ ಕುದಿಸಿ, ಸ್ವಲ್ಪ ಸಕ್ಕರೆ ಹಾಕಿ ದಿನಕ್ಕೆ 3 ಬಾರಿ ಆಹಾರ ಸೇವನೆ ಮಾಡಿದರೆ ಋತುಸ್ರಾವದ ತೊಂದರೆಗಳು ನಿವಾರಣೆಯಾಗುತ್ತದೆ.
*1 ತುಂಡು ಶುಂಠಿ, 1 ಲವಂಗ, 1 ಹರಳು ಉಪ್ಪು ಇವುಗಳನ್ನು ಬಾಯಿಯಲ್ಲಿಟ್ಟು ಚಪ್ಪರಿಸುವುದರಿಂದ ಕೆಮ್ಮು, ಗಂಟಲು ಕೆರೆತಗಳನ್ನು ಹೋಗಲಾಡಿಸಬಹುದು.
* ಶುಂಠಿಯನ್ನು ನೀರಿನಲ್ಲಿ ಅರೆದು ಬರುವ ಗಂಧವನ್ನು ಹಣೆಗೆ ಲೇಪ ಮಾಡಿ ಹಚ್ಚುವುದರಿಂದ ತಲೆನೋವು ನಿವಾರಣೆಯಾಗುತ್ತದೆ.
* ಒಣ ಶುಂಠಿ ಚೂರ್ಣವನ್ನು ಬೆಲ್ಲದೊಂದಿಗೆ ನೀಡುವುದರಿಂದ ಅಜೀರ್ಣದಿಂದ ಉಂಟಾದ ಭೇದಿ ಹತೋಟಿಗೆ ಬರುತ್ತದೆ.
* ಒಣ ಶುಂಠಿ, ಮೆಣಸು ಮತ್ತು ಹಿಪ್ಪಲಿಗಳನ್ನು ಸಮನಾಗಿ ತೆಗೆದುಕೊಂಡು, ಹುರಿದು , ಪುಡಿ ಮಾಡಿಕೊಂಡು ತೆಳು ಬಟ್ಟೆಯಲ್ಲಿ ಸೋಸಿ, ಬೆಣ್ಣೆಯೊಡನೆ ಸೇವಿಸಿದರೆ ಹೊಟ್ಟೆ ನೋವು ನಿವಾರಣೆಯಾಗುತ್ತದೆ.
*ಶುಂಠಿಯನ್ನು ಜಜ್ಜಿ ರಸ ತೆಗೆದು, ಒಂದು ಚಮಚ ತಾಜಾ ರಸಕ್ಕೆ ಜೇನುತುಪ್ಪ ಬೆರೆಸಿ ದಿನಕ್ಕೆ ಮೂರುಸಲ ಸೇವಿಸಿದರೆ ಕೆಮ್ಮು ಪರಿಹಾರವಾಗುತ್ತದೆ.
* ಒಂದು ಚಮಚ ಹಸಿ ಶುಂಠಿ ರಸಕ್ಕೆ ಒಂದು ಚಮಚ ನಿಂಬೆ ರಸ, ಒಂದು ಚಿಟಿಕೆ ಉಪ್ಪು ಬೆರೆಸಿ ಊಟದ ನಂತರ ಸೇವಿಸಿದರೆ ಅಜೀರ್ಣಕ್ಕೆ ಒಳ್ಳೆಯದು.
* ಬಾಯಿ ರುಚಿ ಕೆಟ್ಟಾಗ, ಹೊಟ್ಟೆ ಉಬ್ಬರಿಸಿದಾಗ, ಶುಂಠಿ ಪುಡಿಗೆ ನೆಲ್ಲಿಕಾಯಿ,ಅಳಲೆಕಾಯಿ ನಿಂಬೆರಸ ಬೆರೆಸಿ ಬಿಸಿನೀರಲ್ಲಿ ಸೇವನೆ ಮಾಡಿದರೆ ಒಳ್ಳೆಯದು.
* ಶ್ವಾಸ ಸಂಬಂಧಿ ಖಾಯಿಲೆಗೆ, ಶುಂಠಿಗೆ ಕರಿಮೆಣಸು,ಜೇನುತುಪ್ಪ ಬೆರೆಸಿ ಬಿಸಿನೀರಿನೊಡನೆ ಕುಡಿಯುವುದು ಒಳ್ಳೆಯದು.
ವಾಂತಿ,ವಾಕರಿಕೆಗೆ, ಹಸಿಶುಂಠಿರಸ, ದಾಳಿಂಬೆರಸ, ಸ್ವಲ್ಪ ಜೀರಿಗೆಪುಡಿ ಸೇರಿಸಿ ಬರಿ ಹೊಟ್ಟೆಗೆ ಸೇವಿಸಿ.
* ತಲೆನೋವಿಗೆ, ಶುಂಠಿಯನ್ನು ಹಾಲಿನಲ್ಲಿ ಅರೆದು ಪಟ್ಟು ಹಾಕಿದರೆ ಉಪಶಮನವಾಗುತ್ತದೆ.
* ಅರ್ಧ ಲೋಟ ಬಿಸಿ ನೀರಿಗೆ ಶುಂಠಿ ರಸ, ಬೆಲ್ಲ ಬೆರೆಸಿ ಕಲಸಿ ಬೆಳಗ್ಗೆ ಮತ್ತು ರಾತ್ರಿ ಮೂರು ದಿನಗಳ ಕಾಲ ಕುಡಿದರೆ ನೆಗಡಿ ನಿವಾರಣೆಯಾಗುತ್ತದೆ.
* ಶುಂಠಿ, ಹಿಪ್ಪಲಿ, ಕಾಳು ಮೆಣಸು ಮತ್ತು ತುಳಸಿ ಇವುಗಳನ್ನು ತಲಾ ಐದು ಗ್ರಾಂನಂತೆ ತೆಗೆದುಕೊಮಡು ಪುಡಿ ಮಾಡಿ ಅರ್ಧ ಲೋಟ ನೀರಿಗೆ ಹಾಕಿ ಕುದಿಸಬೇಕು. ಅದು ಅರ್ಧ ಭಾಗಕ್ಕೆ ಇಳಿದ ಮೇಲೆ ಬೆಲ್ಲ ಹಾಲು ಬೆರೆಸಿ ಶೋಧಿಸಿ ದಿನಕ್ಕೆ ಎರಡು ಬಾರಿ ಕುಡಿಯುವುದರಿಂದ ನೆಗಡಿ ನಿವಾರಣೆಯಾಗುವುದು.
* ಶುಂಠಿ, ಮೆಣಸಿನ ಕಾಳು, ಹಿಪ್ಪಲಿಗಳನ್ನು ಪುಡಿಮಾಡಿಟ್ಟುಕೊಂಡು ದಿನಕ್ಕೆರಡು ಬಾರಿ ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ.
* ಒಂದು ಚಮಚೆ ಹಸಿಶುಂಠಿ ರಸಕ್ಕೆ ಒಂದು ಚಮಚೆ ಜೇನುತುಪ್ಪ ಬೆರೆಸಿ ಒಂದರಿಂದ ಎರಡು ಚಮಚೆಯಷ್ಟು ದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ವಾಂತಿ ನಿಂತುಹೊಗುತ್ತದೆ.
* ಒಂದು ಸ್ಪೂನ್ ಹಸಿ ಶುಂಠಿ ರಸಕ್ಕೆ ಅರ್ಧ ಸ್ಪೂನ್ ಜೇನುತುಪ್ಪ ಸೇರಿಸಿ ಸೇವಿಸಿದರೆ ಕೆಮ್ಮು, ಕಫ, ಉಬ್ಬಸ ಕಡಿಮೆಯಾಗುತ್ತದೆ.
* ಶುಂಠಿ, ಹುರುಳಿ, ನೆಲಗುಳ್ಳ, ಆಡುಸೋಗೆಗಳನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಪುಡಿಮಾಡಿ ಕಷಾಯ ಮಾಡಿಕೊಂಡು ಕುಡಿಯುತ್ತಿದ್ದರೆ ಉಬ್ಬಸ ರೋಗ ಕಡಿಮೆಯಾಗುತ್ತದೆ.
* ಶುಂಠಿ, ಹಿಪ್ಪಲಿ, ಕಾಳು ಮೆಣಸುಗಳನ್ನು ಪುಡಿ ಮಾಡಿಕೊಂಡು ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸುತ್ತಿದ್ದರೆ ಉಬ್ಬಸ ರೋಗ ಉಪಶಮನಕ್ಕೆ ಬರುತ್ತದೆ.
* ವಾಯುವಿನಿಂದ ಕೈಕಾಲುಗಳ ಕೀಲುಗಳಲ್ಲಿ ಬಾವು ಮತ್ತು ನೋವುಗಳು ಇದ್ದರೆ ಅದಕ್ಕೆ ಅಮವಾತ ಅಥವಾ ವಾಯುನೋವು ಎನ್ನುತ್ತಾರೆ. ಇದು ದೇಹದಲ್ಲಿ ಜೀರ್ಣಶಕ್ತಿ ಕುಂದಿದಾಗ, ಉಂಟಾದ ಆಮದೋಷದಿಂದ ಬರುವ ರೋಗ, ಒಳ್ಳೆಯ ಪಚನಕಾರಿಯಾದ ಶುಂಠಿ ಈ ಅಮವಾತ ರೋಗಕ್ಕೆ ಒಂದು ದಿವ್ಯೌಷಧ.ಹಸಿ ಶುಂಠಿಯನ್ನು ತೆಗೆದುಕೊಂಡು ಕುಟ್ಟಿ ರಸವನ್ನು ತೆಗೆದು ಒಂದು ಚಮಚ ರಸಕ್ಕೆ ಒಂದು ಚಮಚ ಜೇನು ತುಪ್ಪವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಯಲ್ಲಿ ತೆಗೆದುಕೊಂಡರೆ ಪಚನಶಕ್ತಿ ಹೆಚ್ಚಾಗಿ ಅಮದೋಷ ನಿವಾರಣೆಯಾಗುತ್ತದೆ. ಇದಲ್ಲದೆ ಶುಂಠಿ ರಸ ಮತ್ತು ಜೇನುತುಪ್ಪಗಳನ್ನು ತೆಗೆದುಕೊಳ್ಳುವುದರಿಂದ ಶೀತ ನೆಗಡಿ ಅಜೀರ್ಣಗಳು ದೂರಾಗುತ್ತವೆ. ಸಕ್ಕರೆ ರೋಗ ವುಳ್ಳವರು ಜೇನುತುಪ್ಪಕ್ಕೆ ಬದಲಾಗಿ ಸೈಂಧವ ಲವಣ ವನ್ನು ಉಪಯೋಗಿಸಬಹುದು.
* ಒಣಶುಂಠಿ, ಅಮೃತಬಳ್ಳಿ ಮತ್ತು ಜೇಷ್ಠ ಮಧು ಇವುಗಳನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ವಿಧಿವತ್ತಾಗ ಕಷಾಯ ಮಾಡಿ. ಅಂದರೆ ಮೇಲೆ ಹೇಳಿ ರುವ ಮೂರು ಔಷಧಿಗಳ ಹದಿನಾರರಷ್ಟು ನೀರನ್ನು ಸೇರಿಸಿ ಚೆನ್ನಾಗಿ ಕುದಿಸಿ ಅದರಲ್ಲಿ ಕಾಲುಭಾಗ ಉಳಿ ಯುವಂತೆ ಕಷಾಯ ಮಾಡಿಕೊಳ್ಳಬೇಕು. ಇದಕ್ಕೆ ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಬರಿಯ ಹೊಟ್ಟೆಯಲ್ಲಿ ತೆಗೆದುಕೊಂಡು ಪಥ್ಯ ಮಾಡಿದರೆ ಅಮವಾತ ಗುಣವಾಗುತ್ತದೆ. ಇದು ಅಮ ವಾತಕ್ಕೆ ಸುಲಭ ಹಾಗೂ ಪರಿಣಾಮಕಾರಿ ಔಷಧವಾಗಿದೆ.
* ಅಜೀರ್ಣ ಮತ್ತು ಅತಿಸಾರಗಳಲ್ಲಿ: ಅಜೀರ್ಣ ಮತ್ತು ಅಜೀರ್ಣದಿಂದ ಉಂಟಾಗುವ ಅತಿಸಾರದಲ್ಲಿ 250ರಿಂದ 300 ಮಿ.ಗ್ರಾಂ ಒಣ ಶುಂಠಿ ಚೂರ್ಣವನ್ನು ಸಕ್ಕರೆ ಮತ್ತು ತುಪ್ಪ ಬೆರೆಸಿ ತೆಗೆದುಕೊಂಡರೆ ಒಳ್ಳೆಯ ಲಾಭ ಸಿಗುತ್ತದೆ.
* ಶುಂಠಿಯ ಕ್ಷೀರಪಾಕ: ಒಂದು ಚಮಚ ಒಣಶುಂಠಿ ಪುಡಿಗೆ ಒಂದು ಲೋಟ ನೀರು, ಒಂದು ಲೋಟ ಹಾಲು ಕೂಡಿಸಿ ಚೆನ್ನಾಗಿ ಕಾಯಿಸಬೇಕು. ನೀರಿನ ಭಾಗವೆಲ್ಲಾ ಆವಿಯಾಗಿ ಹೋಗಿ ಹಾಲು ಮಾತ್ರ ಉಳಿದಾಗ (ಒಂದು ಲೋಟ ಹಾಲು ಮಾತ್ರ ಉಳಿಯ ಬೇಕು) ಅದನ್ನು ಒಲೆಯ ಮೇಲಿಂದ ತೆಗೆದು ಶೋಧಿಸಿಕೊಂಡು ಅದಕ್ಕೆ ಬೆಲ್ಲ ಅಥವಾ ಜೇನುತುಪ್ಪ ವನ್ನು ಸೇರಿಸಿ ಪ್ರತಿದಿನ ಬೆಳಗ್ಗೆ ತೆಗೆದುಕೊಂಡರೆ ದೇಹದಲ್ಲಿ ಪಚನ ಶಕ್ತಿ ಹೆಚ್ಚಾಗುತ್ತದೆ, ಶೀತ ಕೆಮ್ಮುಗಳು ಬಾಧಿಸುವುದಿಲ್ಲ. ಮಳೆಗಾಲಕ್ಕೆ ಇದು ಒಂದು ಉತ್ತಮ ಪಾನೀಯ. ಕೆಲವರಿಗೆ ಹಾಲು ಕುಡಿದರೆ ಜೀರ್ಣವಾಗುವುದಿಲ್ಲ.ಅಂತಹವರು ಮೇಲೆ ಹೇಳಿರುವ ಕ್ಷೀರ ಪಾಕ ಮಾಡಿ ತೆಗೆದುಕೊಳ್ಳಬಹುದು.
* ಮಕ್ಕಳ ಶೀತಕ್ಕೆ: ಮಕ್ಕಳಿಗೆ ನೆಗಡಿ ಶೀತವಾಗಿ ಜ್ವರ ಬಂದು, ಮೂಗು ಕಟ್ಟಿ, ಉಸಿರಾಡಲು ತೊಂದರೆಯಾದಾಗ ೩-೬ ಹನಿ ಹಸಿ ಶುಂಠಿರಸ, ಒಂದು ಚಮಚ ಜೇನುತುಪ್ಪ ಮತ್ತು ೨-೩ ಹನಿ ತುಳಸಿ ರಸ ಸೇರಿಸಿಕೊಟ್ಟರೆ ಬಹುಬೇಗ ಶೀತ ನೆಗಡಿಗಳು ಕಡಿಮೆಯಾಗಿ ಮಗುವಿಗೆ ಆರಾಮವೆನಿಸುತ್ತದೆ.
* ದೇಹದ ತೂಕ ಕಡಿಮೆ ಮಾಡಲು: ಒಂದು ದೊಡ್ಡ ಲೋಟ ಕಡೆದ ಮಜ್ಜಿಗೆಗೆ ಎರಡು ಚಮಚ ಹಸಿ ಶುಂಠಿ ರಸ ಮತ್ತು ಸ್ವಲ್ಪ ಸೈಂಧವ ಲವಣವನ್ನು ನೀರಿನಲ್ಲಿ ಪ್ರತಿ ದಿನ ತೆಗೆದುಕೊಂಡು ಜಿಡ್ಡಿನ ಪದಾರ್ಥ, ಸಿಹಿ ಪದಾರ್ಥಗಳನ್ನು ಬಿಟ್ಟು ಪಥ್ಯ ಮಾಡಿದರೆ ದೇಹದಲ್ಲಿ ಕೊಬ್ಬಿನ ಅಂಶ ಕಡಿಮೆಯಾಗುತ್ತದೆ. ಇದಲ್ಲದೆ ಪಚನ ಶಕ್ತಿ ಹೆಚ್ಚಾಗುತ್ತದೆ. ತಿಂದ ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ. ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಿ ಆರೋಗ್ಯ ಸುಧಾರಣೆಯಾಗುತ್ತದೆ.
* ಶುಂಠಿಯನ್ನು ಪ್ರತಿ ದಿನ ಊಟದಲ್ಲಿ ಸಾಕಷ್ಟು ಬಳಸಿದರೆ, ಅದು ಊಟಕ್ಕೆ ರುಚಿಯನ್ನು ಕೊಡುವುದೇ ಅಲ್ಲದೆ, ಪಚನ ಕ್ರಿಯೆಯನ್ನು ವದ್ಧಿಗೊಳಿಸಿ, ಆಹಾರವು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ, ದೇಹಕ್ಕೆ ಪೋಷಣೆ ಕೊಟ್ಟು ಆರೋಗ್ಯವನ್ನು ಕಾಪಾಡುತ್ತದೆ.