Friday, July 08, 2011

HEALTH BENEFITS OF PALAK ಪಾಲಕ್ :

ಪಾಲಕ್ :
ಪಾಲಕ್ ಅಂದ್ರೆ ತರಕಾರಿ ಸೊಪ್ಪುಗಳ ರಾಣಿ. ಅದರಲ್ಲಿರುವಷ್ಟು ಪೌಷ್ಟಿಕಾಂಶ, ಸತ್ವ, ಖನಿಜಾಂಶ ಬೇರೆ ಯಾವುದರಲ್ಲೂ ಇಲ್ಲ ಅಂತ ನನ್ನ ತಿಳುವಳಿಕೆ. ಪ್ರೋಟಿನ್, ವಿಟಮಿನ್, ಫ್ಯಾಟ್, ಕಾರ್ಬೊಹೈಡ್ರೆಟ್, ಲವಣಾಂಶ ಹೀಗೆ ಸಾಕಷ್ಟು ನ್ಯೂಟ್ರಿನ್ ಗಣಿ ನಮ್ಮ ಪಾಲಕ್ ರಾಣಿ.

ಪಾಲಕ್ ಬಗ್ಗೆ ಒಂದು ಪುಸ್ತಕನೇ ಬರೀಬಹುದು. ಯಾಕೆಂದರೆ ಪಾಲಕ್ ಮಹಾತ್ಮೆ ಇಷ್ಟಕ್ಕೆ ಮುಗಿಯೋದಿಲ್ಲ. ಹೃದಯದ ಆರೋಗ್ಯಕ್ಕೆ, ಕಣ್ಣಿನ ಆರೋಗ್ಯಕ್ಕೆ ಇದು ಒಳ್ಳೆಯದಂತೆ. ದೃಷ್ಟಿಯು ಹೆಚ್ಚು ತೀಕ್ಷ್ಣವಾಗುವುದರಿಂದ ಇದನ್ನು ವಾರಕ್ಕೊಮೆಯಾದರೂ ಏನಾದರೂ ಅಡುಗೆ ಮಾಡಲೇ ಬೇಕು ಅಂತ ನನ್ನ ಕೋರಿಕೆ. ಮಿದುಳು, ಎಲುಬಿನ ಆರೋಗ್ಯಕ್ಕೆ ಸಹಕರಿಸುವುದರಿಂದ ಮಕ್ಕಳಿರುವ ಮನೆಯವರೆಲ್ಲ ಇದನ್ನು ದಿನನಿತ್ಯದ ಅಡುಗೆಗೆ ಉಪಯೋಗಿಸಬಹುದು.

ಸರಿ ಪಾಲಕ್ ನಿಂದ ಸಾಕಷ್ಟು ಬಗೆಯ ಆಹಾರ ತಯಾರಿಸಬಹುದು. ಪಾಲಕ್ ಮುರ್ಗಿ, ಪಾಲಕ್ ದಾಲ್, ತಿಳಿಸಾರು, ಪಾಲಕ್ ಚಟ್ನಿ, ಪಾಲಕ್ ಕರಿ ಮಾಡಬಹುದು. ಇದರಲ್ಲಿ ನನಗೆ ಇಷ್ಟವಾಗೋದು ಪಾಲಕ್ ಕರಿ. ಅದನ್ನು ಮಾಡೋದು ಸಹ ಸುಲಭವೇ. ಅರೇ ನೀವು ಪಾಲಕ್ ಕರಿ ಹೇಗೆ ಮಾಡ್ತಿರಿ ನಮಗೂ ಹೇಳಿಕೊಡಿ ಅಕ್ಕ ಅಂತ ಕೇಳ್ತಿರಿ ಅಂತ ನನಗೊತ್ತು. ಸರಿ ಇನ್ಯಾಕೆ ತಡ ನಿಮ್ಮ ಮನೆಯಲ್ಲಿ ನಾಲ್ಕೈದು ಜನರಿದ್ದಾರೆ ಅಂದುಕೊಳ್ಳೋಣ. ಅಷ್ಟು ಜನರಿಗೆ ಬೇಕಾಗುವಷ್ಟು ಪಾಲಕ್ ಕರಿ ತಯಾರಿಸಿರಿ.

ಏನೆಲ್ಲ ಬೇಕು?

* 200 ಗ್ರಾಂನಷ್ಟು ಪಾಲಕ್ ಸೊಪ್ಪು
* ಹಸಿಮೆಣಸಿನ ಕಾಯಿ ಎರಡು ಮೂರು ಇರಲಿ. ದೊಡ್ಡದಾಗಿದ್ದರೆ ಎರಡೇ ಎರಡು ಸಾಕು.
* ಬೆಳ್ಳುಳ್ಳಿ ಒಂದೆರಡು ಎಸಲು ಇರಲಿ. ಅದನ್ನು ಹಚ್ಚಿಟ್ಟುಕೊಳ್ಳಿರಿ
* ಒಂದು ಈರುಳ್ಳಿ ಮತ್ತು ಒಂದು ಟೊಮೆಟೊವನ್ನು ಕೂಡ ಹಚ್ಚಿಟ್ಟುಕೊಳ್ಳಿ
* ಎರಡು ಚಮಚ ಎಣ್ಣೆ ಮತ್ತು ಒಂದು ಚಮಚ ಸೋಯಾ ಬಿನ್ ಸಾಸ್
* ಅಜಿನೊಮೆಟೊ ಒಂದು ಚಿಟಿಕೆಯಷ್ಟು ಇರಲಿ
* ಚಿಲ್ಲಿ ಸಾಸ್ ಒಂದು ಟೀ ಚಮಚ ಮತ್ತು ಬಿಳಿ ಕಾಳುಮಣಸು ಕಾಲು ಟೀ ಚಮಚದಷ್ಟಿರಲಿ.

ತಯಾರಿಸುವ ವಿಧಾನ

* ಪಾಲಕ್ ಸೊಪ್ಪನ್ನು ಚೆನ್ನಾಗಿ ತೊಳೆದು ಹಚ್ಚಿಟ್ಟುಕೊಳ್ಳಿ. ಅದನ್ನು ಒಂದೆರಡು ನಿಮಿಷಗಳ ಕಾಲ ಬೆಯಿಸಿ. ಅದರ ನೀರು ತೆಗೆದು ಬೆಂದ ಪಾಲಕ್ ಸೊಪ್ಪನ್ನು ಮಿಕ್ಸಿಯಲ್ಲಿ ಪೇಸ್ಟ್ ಮಾಡಿ ರೆಡಿಯಾಗಿಡಿ.
* ಬಾಣಲೆ ಅಥವಾ ಇನ್ಯಾವುದೋ ಪಾತ್ರೆಯನ್ನು ಸ್ಟವ್ ಮೇಲಿಟ್ಟು ಅದಕ್ಕೆ ಬೆಳ್ಳುಳ್ಳಿ, ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ ಎಲ್ಲವನ್ನೂ ಹಾಕಿ ಚೆನ್ನಾಗಿ ಫ್ರೈ ಮಾಡಿರಿ. ನಂತರ ಟೊಮೆಟೊ ಹಾಕಿ ಚೆನ್ನಾಗಿ ಬೇಯಿಸಿರಿ.
* ಮತ್ತೆ ಅದಕ್ಕೆ ಪಾಲಕ್ ಪೇಸ್ಟ್, ಬಿಳಿ ಮೆಣಸಿನಪುಡಿ, ಅಜಿನೊಮೊಟೊ, ಸೊಯಾ ಸಾಸ್ ಮತ್ತು ಸ್ವಲ್ಪ ನೀರು ಹಾಕಿ ಎರಡು ಮೂರು ನಿಮಿಷ ಕುದಿಸಿ ಕೈಯಾಡಿಸುತ್ತಿರಿ. ಅದಕ್ಕೆ ಒಂದಿಷ್ಟು ತರಕಾರಿ ಮತ್ತು ಸ್ವಲ್ಪ ತೆಂಗಿನ ಹಾಲು ಕೂಡ ಹಾಕಿದರೆ ಇನ್ನಷ್ಟು ಸೂಪರ್ ಆಗಿರುತ್ತದೆ. ಪಾಲಕ್ ಕರಿ ರೆಡಿ. ನಿಮ್ಮ ಮತ್ತು ಮಕ್ಕಳ ಆರೋಗ್ಯಕ್ಕಾಗಿ ಬಡಿಸಿರಿ. ಪಾಲಕ್ ಇನ್ನು ಮುಂದೆ ನಿಮ್ಮ ಅಡುಗೆ ಮನೆಯ ಬಾಲ್ಯದ ಗೆಳತಿಯಾಗಲಿ

No comments:

Post a Comment